ನಿಮಗೆಲ್ಲ ನೆನಪಿದೆ ತಾನೆ

ನಿಮಗೆಲ್ಲ ನೆನಪಿದೆ ತಾನೆ?

ಹಳ್ಳಿಯಾದರೇನು , ದಿಲ್ಲಿಯಾದರೇನು ?
ಚೊಕ್ಕಟಗೊಳಿಸೊರು ನಾವು ತಾನೆ
ಪೈಖಾನೆ ಪಿಟ್ಟು ತುಂಬಿತೆಂದು ಕೂಗಿ ಕರೆದಾಗ ,
ನಿಮ್ಮ ಬಳಿ ಓಡಿಬಂದ್ದು ನಾವು ತಾನೆ ?
ನಮ್ಮ ಕೈ ಮೈ ಹೊಲಸಾದರೆನು
ಯಾರಿಗೂ ಹೊಲಸು ಬಯಸದವರು ನಾವು ತಾನೆ
ತಲೆಮಾರುಗಳಿಂದಲೂ ಕೈ ಎತ್ತಿ
ತಲೆ ಮೇಲೆ ಮಲಹೊತ್ತು ಹೊರಹಾಕಿದವರು ನಾವು ತಾನೆ
ಮುರುಕು ಗುಂಡಿ, ಒಡಕು ಗಡಗಿ  ಕೈಯಲ್ಲಿ ಹಿಡಿದು
ಮಲ ಮೇಲೆತ್ತಿ ಹೊರಹಾಕುವಾಗ ,
ತುಳುಕಿ ಮೈ ಮೇಲೆ ಸುರ್ಕೊಂಡಿದ್ದು ನಾವು ತಾನೆ
ನಮ್ಮ ಕಂಡು ಛಿ ಎಂದು ಮುಗು ಮುಚ್ಚಿ ದೂರ ಸರಿದರೂ
ಮೈಲಿಗೆ, ಅನಿಷ್ಟ ,ಪ್ರಾರಬ್ದ ಅಪಶಕುನವೆಂದು ಹರಿಹಾಯ್ದರೂ
ಕೈ ಚಾಚಿ ಮಲ ಬಾಚಿ  ಕೆಲ್ಸಮಾಡೊರು ನಾವು ತಾನೆ
ಸೋರುವ ಜೊಪಡಿ, ಸೂರಿಲ್ಲದ ಬಾಳು
ಸಿರಿವಂತರ ಛಾಕ್ರಿಯ ,ಛಾಕು ಧಿಮಾಕು‌
ಅದಾವುದೂ ಎಣಿಕೆ ಮಾಡದೆ ನಿಷ್ಟೆಯ ಉಸಿರು ಬಿಟ್ಟು
ನಿಮಗೆ ನಿರ್ಮಲ ನೈರ್ಮಲ್ಯದ ಬದುಕು ಕಟ್ಟಿಕೊಟ್ಟವರು ನಾವು ತಾನೆ
ಅಷ್ಟಕ್ಕೂ ದೊಡ್ಡ ದನಿಯವರ  ಹೀನ ಬೈಗುಳಗಳಿಗೆ
ತಲೆ ತಗ್ಗಿಸಿ ಮೈ ಬಗ್ಗಿಸಿ ಬಾಳೊರು ನಾವು ತಾನೆ
ನಮ್ಮ ಕಂಡು ಮರುಗುವ ಜೀವಗಳಿವೆಯಲ್ಲ ಎಂದು ಕಿರು ನಗೆಯ ಬಿರಿ
ಮರುದಿನ ಕೇರಿಗೆ ಕರ್ದು , ಕೈ ತೊರ್ಸಿ ಕೆಲ್ಸ ಹೇಳೊರು ನೀವು ತಾನೆ
ಉಜ್ಜಿ ತೊಳೆಯೋ ಕೆಲಸಕ್ಕೆ ಇವರೇ ಲಾಯಕ್ಕು
ಸರ್ಕಾರಿ ಕೆಲಸಕೊಟ್ಟು ಮುನಸಿಪಾಟಿ  ಕಛೇರಿಗೆ  ಕರೆಯೊದು ನಮ್ಮನು ತಾನೆ
ದಿಟವಾಗಿ ನಮ್ಗೆಲ್ಲ ಲಾಯಕ್ಕಾದ ಹೆಸರಿಟ್ಟು ಕರೆದಿರಿ ನೀವು
ಏನು ಕರೆದರೂ ಸರಿ ಕೂಗಿ ಜೈ ಅಂದೊರು ನಾವು ತಾನೆ
ಈ ಉಳ್ಳವರೆಲ್ಲರೂ ನಮ್ಮಂತೆ ಮನುಜರು ನಡೆವ ಮತ ಪಥ ಬೇರೆ ತಾನೆ
ಕೊಂಚ ಪ್ರೀತಿ ಮಮತೆ ತ್ಯಾಗದ ಬದುಕ ಅರಸಿ  ಕೊಂಡೊರು ನಾವು ತಾನೆ
ಅಂದು ಬಾಬಾ ಸಾಹೇಬರ ಕೂಗೂ  ಮುಗಿಲ ಹರಿದಿತ್ತು
ಆ ನಿಷ್ಕರುಣಿ ದೇವರು ಆಗತಾನೆ ಅಲ್ಲವೇ
ಕಿಂಚಿತ್ತು ನಮ್ಮ ಹಣೆಬರಹ ಬದಲಿಸಿ ಬರೆದದ್ದು
ನಿಮಗೆಲ್ಲ ನೆನಪಿದೆ ತಾನೆ ...
*****
ಅನಿಕೇತನ ಪ್ರಿಯ

15-2-2016  ಮದ್ಯಾಹ್ನ. 3 ಗಂ ಗೆ , ಸಪಾಯಿ ಕರ್ಮಚಾರಿ ಗಳ ಕುರಿತು ಪೇವರ್ ಓದಿ ಬರೆದದ್ದು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ