ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ
ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ...
ಗೂಗಲ್ ನಲ್ಲಿ ಯಡ್ರಾಮಿ ಎಂದು ಸರ್ಚ್ ಮಾಡಿದೆ, ಐದಾರು ವರ್ಷಗಳ ಹಿಂದೆ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಳಸಲು ಮಾಹಿತಿ ಇತ್ತು . ಇದರ ಹೊರತಾಗಿ ಮತ್ತಾವ ಕುತುಹಲದ ವಿಶೇಷವಾದ ,ಹೆಮ್ಮೆ ಪಡುವ ಮಾಹಿತಿ ಸಿಗಲಿಲ್ಲ. ಸರ್ಕಾರ ಹೊಸದಾಗಿ ತಾಲ್ಲೂಕು ರಚಿಸಲು ಬಜೆಟ್ ನಲ್ಲಿ ಈ ಊರನ್ನು ಆಯ್ಕೆ ಮಾಡಲಾಗಿದೆ . ಹೀಗಾಗಿ ಈ ಊರಿನ ಬಗ್ಗೆ ನಾ ಕಂಡಂತೆ ಬರಿಬೇಕು ಅನಿಸಿತು ..
ಇತಿಹಾಸ ಹೆಕ್ಕಿ ತಗೆದಾಗ 12ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಎಳರಾಮೆ ಎಂದು ಉಲ್ಲೇಖಿತವಾದ ಇಂದಿನ ಯಡ್ರಾಮಿಯ ಬಗ್ಗೆ ಮಾಹಿತಿ ಸಿಗುತ್ತದೆ. ಇದು ಒಂದು ಅಗ್ರಹಾರವಾಗಿತ್ತು. ಈಗ ಊರಿಗೆ ಅಭಿವೃದ್ದಿ ಎನ್ನುವದು ಮರಿಚಿಕೆ ಯಾಗಿಯೇ ಉಳಿದುಕೊಂಡಿದೆ. ಅಂದಹಾಗೆ ಈ ಊರು ಕಲ್ಬುರ್ಗಿ ಜಿಲ್ಲೆ , ಜೇವರ್ಗಿ ತಾಲ್ಲೂಕಿನಲ್ಲಿದೆ . 2017 - 18 ನೇ ಆರ್ಥಿಕ ವರ್ಷದಲ್ಲಿ ಈ ಊರು ತಾಲ್ಲೂಕು ಎಂದು ಘೊಷಿಸಲಾಗಿದೆ. ಈ ಊರು ನನ್ನ ಸ್ವ ಗ್ರಾಮ . ನಾನು ತೊರೆದು ಸುಮಾರು 17 ವರ್ಷ ಕಳೆದುಹೋಗಿವೆ. ಬಜೇಟ್ ನಲ್ಲಿ ತಾಲ್ಲೂಕು ಎಂದ ಕೂಡಲ ದೊಪ್ಪ ಎಂದ ಹತ್ತಾರು ಪ್ರಶ್ನೆಗಳು ಮೆದುಳಲ್ಲಿ ಹಾಗೆ ಹಾದು ಹೋದವು .ಈ ಕುರಿತು ಚಿಂತನಾತ್ಮಕ ವಿಶ್ಲೇಷಣೆ ಮಾಡಲು ಮನಸ್ಸು ಮಿಡಿಯಿತು ...
*. ಕಳೆದ ಬಿಜೆಪಿಸರ್ಕಾರ ಮತ್ತು ಇಂದಿನ ಸಿದ್ದು ಸರ್ಕಾರದಲ್ಲಿ ಅಂದರೆ ,ಎರಡು ಬಾರಿ ತಾಲ್ಲೂಕು ಎಂದು , ಬಜಟ್ ನಲ್ಲಿ ಘೋಷಣೆ ಮಾಡಿ ಮೂಗಿಗೆ ತುಪ್ಪ ಸವರಲಾಗಿದೆ . ಆದರೆ ,ಅದಿಕೃತವಾಗಿ ತಾಲ್ಲೂಕು ರಚನೆಯ ಗೆಜೆಟ್ ಆಗುವವರೆಗೂ ಇದನ್ನು ದಿಟವಾಗಿ ನಂಬಲು ಸಾದ್ಯವಿಲ್ಲ .. ಘೋಷಣೆ ಆದ ತಕ್ಷಣ ನಮ್ಮ ಮನದಲ್ಲಿ ಒಂದಿಷ್ಟು ಕಲ್ಪನೆಗಳು ಕನಸುಗಳು, ಮೂಡುತ್ತವೆ. . ಊರಿಗೆ ನಾಲ್ಕಾರು ಸರ್ಕಾರಿ ಇಲಾಖೆಗಳು ಬರಬಹುದು , ಒಂದಿಷ್ಟು ವೈವಾಟು ಹೆಚ್ಚಬಹುದು ,ಸೂತ್ತ ಮುತ್ತಲಿನ ಪ್ರದೇಶ ಅಬಿವೃದ್ದಿ ಆಗಬಹುದು ಎಂದು ..ಇತ್ಯಾದಿ ..ಆದರೆ , ಇದು ವಾಸ್ತವದಲ್ಲಿ ಮ್ಯಾಜಿಕ್ ಮಾಡಿದಂತಲ್ಲ . ಥಟ್ ಅಂತ ದಿನ ಬೆಳಗಾಗುವದರೊಳಗೆ ಎಲ್ಲವೂ ಬದಲಾಗಲಾರದು . ಅಭಿವೃದ್ಧಿ ಎನ್ನುವದು ದುತ್ ಎಂದು ಉದ್ಬವಿಸಿ ನಿಲ್ಲಲಾರದು .. ಸರ್ಕಾರದ ಕಾಳಜಿ ಕಕಲತ್ತಿನಿಂದ ಮತ್ತು ಅಧಿಕಾರಿಗಳು / ಸ್ಥಳಿಯ ರಾಜಕಾರಣಿಗಳ ಇಚ್ಚಾಶಕ್ತಿ ಮತ್ತು ಊರಿನ ನಾಗರಿಕರ,ಮುಖಂಡರ ಹೋರಾಟ ಹಕ್ಕೊತ್ತಾಯ, ಒತ್ತಡ ಹಾಕುತ್ತಾ ಸರ್ಕಾರದ ಬೆನ್ನಿಗೆ ಬಿದ್ದು ಹಲೆ ಹಲೇ ಎಂದರೂ ಬರೊಬ್ಬರಿ 5 ರಿಂದ 10 ವರ್ಷಗಳು ಅಲಿಬೇಕು . ಆಗ ಒಂದಿಷ್ಟು ಬದಲಾವಣೆಯ ಗಾಳಿ ಈ ಊರಿನಲ್ಲಿ ಬಿಸಲು ಸಾದ್ಯ. .. ಒಂದು ತಾಲ್ಲೂಕು ಹೊಂದಿರಬಹುದಾದ ಅಗತ್ಯ ಮೂಲಭೂತ ಸೌಲಭ್ಯ ಪಡೆದು,ಅಭಿವೃದ್ಧಿ ಹಾದಿ ಹಿಡಿಯಲು ಸಾದ್ಯ . ಕೇವಲ ಬಜೆಟ್ ನಲ್ಲಿ ಘೋಷಣೆ ಮಾಡಿದ ಮಾತ್ರಕ್ಕೆ ಇದು ಸಾದ್ಯವಿಲ್ಲ .. ಬದಲಾವಣೆಯ ಇಚ್ಚಾಶಕ್ತಿ ,ಆಕಾಂಕ್ಷೆ, ತುಡಿತ, ಹಂಬಲ , ಪ್ರತಿ ಮನೆಯ ಮನದಲ್ಲೂ ಮನೆಮಾಡಬೇಕು..
ಈ ಊರು ಜಿಲ್ಲಾ ಕೇಂದ್ರದಿಂದ ಸರಿ ಸುಮಾರು 82 ಕೀ.ಮೀ ದೂರದಲ್ಲಿದೆ. ಊರನ್ನು ಒಮ್ಮೆ ಸುತ್ತಿ ಬಂದರೆ ಸಾಕು ,ಊರು ಹೇಗಿದೆ ಎಂದು ಸುಲಭವಾಗಿ ನಿರ್ದಾರ ಮಾಡಬಹುದು . ಯಡ್ರಾಮಿ ಕೆಂದ್ರವಾಗಿಟ್ಟುಕೊಂಡು ಸರಿ ಸೂಮಾರು 20 ಕೀ ಮಿ ನ ಸೂತ್ತ ಮುತ್ತಲಿನ ಪ್ರದೇಶ ಗಮನಿಸಿದರೆ ಸಾಕು, ಅಭಿವೃದ್ದಿ ಬಗ್ಗೆ ಕಾಳಜಿ ಇರುವ ಯಾರೆ ಆಗಲಿ ಅವರಿಗೆ ,ಬೆಸರ ,ಜಿಗುಪ್ಸೆ ,ಹತಾಸೆ ,ನೊವು, ಸಿಟ್ಟು ,ಆಕ್ರೊಷ ಎಲ್ಲವೂ ಮನದುಂಬಿ ಬರುತ್ತೆ . ಇಲ್ಲಿ ನಿವಾಗಿಯೂ ಜನಪ್ರತಿನಿಧಿಗಳೂ ಇದ್ದಾರೆಯೆ ? ಎಂದು ಪ್ರಶ್ನೆ ಎಳುತ್ತದೆ .
ಮಾನವ ಅಭಿವೃದ್ದಿ ಸೂಚಿಯಲ್ಲಿ ಬಹಳಷ್ಟು ಹಿಂದುಳಿದ ಪ್ರದೇಶ ಇದು. ಮೂಲಭೂತ ಸೌಲಭ್ಯಗಳು ಮರಿಚಿಕೆಯಾದ ಊರು. ಬಹುಷ್ಯ ಅಧಿಕೃತವಾಗಿ ತಾಲ್ಲೂಕು ಎಂದು ಘೋಷಣೆ ಆದರೆ , ಅತ್ಯಂತ ಹಿಂದಿಳಿದ ತಾಲ್ಲೂಕಿನ ಟಾಪ್ ಲಿಸ್ಟ್ ನಲ್ಲಿ ನಿಲ್ಲುವದು.ಯಾವುದೇ ರಂಗದ ಮೇಲೂ ಕಣ್ಣು ಆಡಿಸಿದರೂ ಸಾಕು , ಒಂದು ಸಾಮಾನ್ಯ ವಾದ ಚಿಕ್ಕ ಪ್ರಗತಿ ಕಾಣದು . ಹೈದ್ರಾಬಾದ್ ಕರ್ನಾಟಕ ಎಂದು ವಿಶೇಷ ಸ್ಥಾನ ಮಾನ ಅನುದಾನ ಪ್ರಾತಿನಿದ್ಯ ನೀಡಿದ ಮೇಲೂ ,ಒಂದಷ್ಟು ಬದಲಾವಣೆಯ ಬರವಸೆಯ ಶಲೆ ಇಲ್ಲಿ ಮೂಡಿಲ್ಲ . ಅಷ್ಟಕ್ಕೂ ಜನಪ್ರತಿನಿಧಿಗಳ ಮುಂದೆ ಹೋಗಿ ರಂಪಾಟ ಮಾಡಿ ಹೋರಾಟ ಮಾಡಿ ತಮ್ಮ ಹಕ್ಕು ಕೇಳುವದು ಈ ಊರಿನ ಸಂಪ್ರದಾಯ , ಜಾಯಮಾನವೂ ಇಲ್ಲಿ ಕಾಣದು. ಊರಿನ ಸಮಗ್ರ ಅಭಿವೃದ್ದಿಗಾಗಿ ಕಾಳಜಿ ಕಕಲತ್ತು ಕಳಕಳಿಯಿಂದ ಹೋರಾಡುವ ಜನರಾಗಲಿ ,ಸ್ಥಳಿಯ ರಾಜಕಾರಣಿಗಾಳಾಗಲಿ ,ಸಂಘಟನೆಗಳಾಗಲಿ, ಜನಪ್ರತಿನಿಧಿ ಗಳಾಗಲಿ , ಚಿಂತಕರಾಗಲಿ, ಬುದ್ದಿ ಜೀವಿಗಳಾಗಲಿ ಈ ಊರಿನ ಇತಿಹಾಸದಲ್ಲೇ ಕಾಣದು.. ಸರ್ಕಾರವೇ ಎಲ್ಲರಿಗೂ ಸಂಪ್ರದಾಯದಂತೆ ಸಹಜವಾಗಿ ಎಲ್ಲರಿಗೂ ಕೊಡುವಾಗ ಈ ಊರಿಗೂ ನೀಡೊಣ ಎಂದು , ತಾನಾಗಿಯೇ ನೀಡಬೆಕೆ ಹೊರತು , ಬದಲಾವಣೆಗಾಗಿ ಹಪಹಪಿಸುವ ಜಾಯಮಾನ ಇಲ್ಲಿ ಕಾಣದು ... ಇಷ್ಟಕ್ಕೂ ಈ ಉರಿಗೆ ಇಲ್ಲಿವರೆಗೂ ಅಷ್ಟು ಇಷ್ಟು ಸರ್ಕಾರಿ ಸೌಲಭ್ಯ ಬಂದರೂ ಅದು ಸಹಜವಾಗಿಯೆ . ಹೊರತು ಹೋರಾಟದ ಪ್ರತಿಫಲದಿಂದ ಅಲ್ಲ..
ನನ್ನ ಚಿಂತನೆಯ ಅನುಭವದ ಮೂಸೆಯಲ್ಲಿ ನನ್ನೂರಿನ ಬಗ್ಗೆ ತೊಚಿದಂತೆ ಗಿಚಲುಪ್ರಯತ್ನಿಸಿರುವೆ . ತಾಲ್ಲೂಕು ರಚನೆಯಾದಾಗ ಆರಂಭದ ಹಂತದಲ್ಲಿ ಎದುರಿಸಬಹುದಾದ ಸವಾಲು ಮತ್ತು ಸಮಸ್ಯೆ ಅಭಿವೃದ್ದಿಯ ಕನಸು ಭವಿಷ್ಯದ ಬದಲಾವಣೆ ಬಗ್ಗೆ ಒಂದಿಷ್ಟು ಆಶಾಭಾವ ಈ ಲೇಖನದ ಮುಂದಿನ ಭಾಗದಲ್ಲಿದೆ.ಬರೆಯುತ್ತಿರುವೆನು.
*ಬೌಗೋಳಿಕ ಮಾಹಿತಿ :-
ಈ ಊರು ಕಲ್ಬುರ್ಗಿ ಜಿಲ್ಲೆ ಗಡಿ ತಾಲ್ಲೂಕಾಗಿ ರಚಿತವಾಗುವದು . ಪಶ್ಚಿಮಕ್ಕೆ ಕೇವಲ 7 ಕೀ ಮೀ ನಡೆದರೆ ಸಾಕು ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕು ಪ್ರಾರಂಭವಾಗುವದು . ಜೇವರ್ಗಿ, ಶಹಾಪುರ , ಆಫಜಲಪುರ, ಸೂರಪುರ ,ಹುಣಸಗಿ ( ಹೊಸ ತಾಲ್ಲೂಕು) ಮತ್ತು ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕುಗಳ ಮದ್ಯ ಗಡಿ ಹಂಚಿಕೊಳ್ಳ ಬೇಕು. ಅಪ್ಪಟ ಬಿಸಿಲು ನಾಡು ಇದು . ಇಲ್ಲಿ ಮೇ ತಿಂಗಳಲ್ಲಿ 45c ಉಷ್ಣಾಂಶದ ಗಡಿ ದಾಟಿದ ಉದಾಹರಣೆಗೆ ಗಳಿವೆ. ವಾರ್ಷಿಕ ಸರಾಸರಿ ಮಳೆ 100ರಿಂದ 120 c m ದಾಟದು . ಕುಲಂಕುಷವಾಗಿ ಗಣತಿಮಾಡಿದರೂಬ ಊರ ಸೂತ್ತ ಮುತ್ತ ಹತ್ತಾರು ಬೃಹತ್ ಮರಗಳು ಕಾಣ ಸಿಗಲಾರವು . ನೈಸರ್ಗಿಕ ಸಂಪನ್ಮೂಲ ಅಂತ ಯಾವ ಕಲ್ಲು ಖನಿಜಗಳು ಇಲ್ಲಿ ಸಿಗಲಾರವು . ಬೆಸಿಗೆಯಲ್ಲಿ ಬರಿದಾಗುವ ಸಣ್ಣ ಪುಟ್ಟ ಹಳ್ಳ ಸುತ್ತ ಅಲ್ಲಲ್ಲಿ ಹರಿದು ಭಿಮಾನದಿ ಕೂಡುವವು . ವಡಗೆರಿ, ಮಾಗಣಗೇರಿ ಅರಳಗುಂಡಗಿ ಆಲೂರು, ಮಳ್ಳಿ,ಕೂಕನೂರು ಸುತ್ತ ಮುತ್ತ ಹರಡಿಕೊಂಡಿರುವ ದೊಡ್ಡ ಊರುಗಳು . 1995 ರಲ್ಲೇ ಕೃಷ್ಣಾ ಮೆಲ್ದಂಡೆ ಕಾಲುವೆ ಜಾಲ ಊರಿನ ಸುತ್ತಲು ನೀರಾವರಿ ಕಲ್ಪಿಸಿದೆ. ಆದರೆ ಇದು ಹೆಸರಿಗಷ್ಟೆ ಇದೆ . ಮಳೆಗಾಲದಲ್ಲೂ ಕಾಲುವೆಯಲ್ಲಿ ನೀರು ಕಾಣುವದು ಅಪರೂಪ . ಇಲ್ಲಿಯ ಕೃಷಿ ಚಟುವಟಿಕೆ ಅಪ್ಪಟ ಮಳೆ ಆಶ್ರಿತವಾದದ್ದು . ಅಂತರ್ಜಲ ಮಟ್ಟ ಅಧಿಕವಾದರೂ ಹೆಚ್ಚು ಬಳಕೆ ಇಲ್ಲ. ಸಮತಟ್ಟಾದ ಕಪ್ಪುಮಣ್ಣಿನ ಫಲವತ್ತಾದ ಭೂಮಿ ಇದೆ .ಅಪ್ಪಟ ಬಯಲು ಸೀಮೆ ಇದು . ಗೋಮಾಳ ,ಪಾಳುಭೂಮಿ, ಸರ್ಕಾರಿ ಕರಾಬು ಬಹಳ ಕಡಿಮೆ ಇದೆ . ಸರ್ಕಾರಿ ಜಾಲಿ ತುಂಬಿದ ಕುಣಿಬಿದ್ದ ರಸ್ತೆಗಳು, ದುರ್ಬಿನ್ ಹಾಕೊಂಡು ಹುಡುಕಿದರೂ ಕಾಣದ ಒಂದು ಗುಡಿಕೈಗಾರಿಕೆ ..,ಇತ್ಯಾದಿ ...ಹೀಗೆ ಈ ಊರಿನ ಆರಂಬಿಕ ಪರಿಚಯ ಮಾಡಬಹುದು.
ಮದುವಣಿಗಿತ್ತಿ ಯಂತೆ ನಾಚಿ ನಿಂತ ಈ ಊರು ಹೊಸ ತಾಲ್ಲೂಕಿನ ಹತ್ತಾರು ಮಜಲುಗಳ ಪರಿಚಯದ ಮಾಹಿತಿ ಕಣಜ ಕೆಳಗಿನಂತೆ ತೆರೆಯಬಹುದು .
ಬೌಗೋಳಿಕ ಮಾಹಿತಿ
ಸ್ವತಂತ್ರ ಪೂರ್ವದಲ್ಲಿ ಹೈದ್ರಾಬಾದ್ ನಿಜಾಮನ ಗಡಿ ಪ್ರಾಂತ್ಯದ ಚಿಕ್ಕ ಊರು .ಎಳರಾಮೆ ಎಂಬುದು ಇದರ ಮೂಲ ಹೆಸರು. ಕಾಲಕ್ರಮೇಣ ಯಡ್ರಾಮಿ ಎಂದು ರೂಪಾಂತರಗೊಂಡಿತು. ಹೊಸ ತಾಲ್ಲೂಕು ಆದರೆ ಜೇವರ್ಗಿ ಇಂದ ಬೇರ್ಪಟ್ಟು ಸೂಮಾರ 800 ಚ .ಕೀ ವ್ಯಾಪಿ ಪಡೆಯಬಹುದು. ಉತ್ತರ ಅಕ್ಷಾಂಶ 76 ರಿಂದ 16 ರೇಖಾಂಶ ಮದ್ಯ ಬರುವದು . ಸಮುದ್ರಮಟ್ಟದಿಂದ 300 ದಿಂದ 400 ಮೀ ಗಳಷ್ಟು ಎತ್ತರದಲ್ಲಿದೆ . ಜನಸಂಖ್ಯೆ ಯಡ್ರಾಮಿ ನಗರದಲ್ಲಿ ಅಂದಾಜು 25 ಸಾವಿರ, ಸದ್ಯ ಗ್ರಾಮಪಂಚಾಯತಿ ಸ್ಥಳಿಯ ಆಡಳಿತವಿದ್ದು .ಪಟ್ಟಣ ಪಂಚಾಯತಿ ( ಪುರಸಭೆ ) ಸ್ಥಾನ ಸಿಗಬಹುದು.ಯಾವುದೇ ನದಿ ಹರಿಯುವದಿಲ್ಲ . 100/150 ಹೆಕ್ಟರ್ ರಷ್ಟು ಪಾಳು ಭೂಮಿಇದೆ. ( ಅರಣ್ಯ ಇಲಾಖೆ ) ಕಾಂಗ್ರೇಸ್ ಪಕ್ಷದ ಧರ್ಮಸಿಂಗ್ ರು ಬಹುಪಾಲು ಈ ಕ್ಷೇತ್ರದ ಜನಪ್ರತಿನಿಧಿ ಯಾಗಿದ್ದವರು. (ಈ ವಿಶ್ಲೇಷಣೆ ಲೇಖನವು ಯಡ್ರಾಮಿ ಮತ್ತು ಅದರ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗ ವ್ಯಾಪ್ತಿ ಆದರಿಸಿದೆ.ಇಲ್ಲಿರುವ ಅಂಕಿ ಅಂಶಗಳು ಖಚಿತವಾಗಿಲ್ಲ ಆದರು ಜೇವರ್ಗಿ ತಾಲ್ಲುಕು ಅರ್ಧ ಬಾಗವನ್ನು ಅಂದಾಜು ಮಾಡಿ ಹೇಳಲಾಗಿದೆ.)
೧) ಜನಸಂಖ್ಯೆ
ಯಡ್ರಾಮಿ ಪಟ್ಟಣದಲ್ಲಿ ಪ್ರಸ್ತುತವಾಗಿ ಅಂದಾಜು ಒಟ್ಟು ಜನಸಂಖ್ಯೆ 25 ಸಾವಿರ ಕ್ಕೂ ಅಧಿಕವಾಗಿದೆ .ಜನಸಂಖ್ಯೆ ಬೆಳವಣಿಗೆ ದರವು ಹೆಚ್ಚಾಗಿದೆ. ಜನಸಾಂದ್ರತೆ ಅಂದಾಜು 150 ಪ್ರ .ಚ. ಕೀ. ಮೀ ಇದೆ .ಪ್ರತಿ ಸಾವಿರ ಪುರುಷರಿಗೆ 930 ಸ್ತ್ರೀಯರು ಸರಾಸರಿ ಜೀವಿತಾವದಿ 60 ವರ್ಷಗಳು.ಯುವಕರಿಗಿಂತ 40 ವರ್ಷ ಮೆಲ್ಪಟ್ಟವರು ಹೆಚ್ಚು ವಾಸವಾಗಿದ್ದಾರೆ .
೨) ಶಿಕ್ಷಣ
ಸ್ವತಂತ್ರ ನಂತರ ಸರ್ಕಾರಿ ಶಾಲಾ ಕಾಲೇಜುಗಳು ಪ್ರಾರಂಭಿಸಲಾಗಿದೆ. ಗುಣಮಟ್ಟದ, ಹಾಗೂ ಖ್ಯಾತಿ ಪಡೆದ ,ದೊಡ್ಡ ಶಿಕ್ಷಣ ಸಂಸ್ಥೆಗಳು ಈ ಬಾಗದಲ್ಲಿಲ್ಲ. ಪ್ರಾಥಮಿಕಶಿಕ್ಷಣದಲ್ಲಿ ಖಾಸಗಿ ಪ್ರಭಾವ ಇತ್ತಿಚೆಗೆ ಕಾಣಿತ್ತಿದೆ.ಊರಿನ ಸುತ್ತಮುತ್ತ ಗ್ರಾಮ ಆದರಿಸಿ ಸಾಕ್ಷರತೆಯ ಪ್ರಮಾಣ ಶೇ 60 ದಾಡದು.ಸ್ತ್ರೀ ಸಾಕ್ಷರತೆ ಬಹಳ ಕಡಿಮೆ ಇದೆ. ಉನ್ನತ ಪದವಿ ಸ್ನಾತಕೋತ್ತರ ಪದವಿ ಪಡೆದವರು ಬೆರಳೆಣಿಕೆಯಷ್ಟು ಜನರು. ಕಾಲೇಜು ಕಲಿಯಲು ಮಕ್ಕಳು ದೂರದ ಸಿಂದಗಿ ,ಜೀವರಗಿ ,ಕಲಬುರ್ಗಿ ಯತ್ತ ಮುಖಮಾಡ ಬೇಕು.ಸಾಂಪದಾಯಿಕ ಶಿಕ್ಷಣದ ಹೊರತಾಗಿ ವಿಶೇಷ ಶಿಕ್ಷಣ ಸಂಸ್ತೆಗಳು ಈ ನಗರದಲ್ಲಿ ಇರುವದಿಲ್ಲ.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸದಾ ಎದ್ದುಕಾಣುವದು.ಒಂದು ಸಣ್ಣ ಗ್ರಂಥಾಲಯದ ನಿರ್ವಹಣೆಯು ನೋಡಲು ಸಿಗಲಾರದು.ಹಿಂದುಳಿದ ಜಾತಿಗಳಲ್ಲಿ ಸಾಕ್ಷರತೆ ಪ್ರಮಾಣ ಬಹಳಷ್ಟು ಕಡಿಮೆಯಿದೆ. ಉನ್ನತ ಶಿಕ್ಷಣ ಪಡೆದು ಮತ್ತು ಉದ್ಯೋಗಕ್ಕಾಗಿ ಊರು ಬಿಟ್ಟವರು / ಪಲಾಯನ ಮಾಡಿದವರು ಮತ್ತೆ ಊರಕಡೆ ಹೆಜ್ಜೆ ಹಾಕುವದು ಅಪರೂಪ . ಇಲ್ಲಿ ಪ್ರತಿಭಾ ವಲಸೆ ಸಾಮಾನ್ಯವಾಗಿದೆ. ನನ್ನ ವಿವೇಚನೆ ಮಟ್ಟಿಗೆ A ಗ್ರೆಡ್ ನ ಸರ್ಕಾರಿ ನೌಕರಾಗಿ ಹುದ್ದೆ ಅಲಂಕರಿಸಿದವರು ಈ ಊರಿನ ಇತಿಹಾಸದಲ್ಲೆ ಇರಲಾರು.
೩) ಕೈಗಾರಿಕೆಗಳು
ಒಂದು ಲಕ್ಷದಷ್ಟು ವಾರ್ಷಿಕ ವೈವಾಟು ಮಾಡುವ ಒಂದೆರ ಒಂದು ಸಣ್ಣ ಗೃಹಾದರಿತ ಕೈಗಾರಿಕೆಗಳು ಈ ಊರ ಸುತ್ತ ಮುತ್ತ ಕಾಣಸಿಗಲಾರವು . ನೈಸರ್ಗಿಕವಾದ ಸಂಪನ್ಮೂಲ, ಕಚ್ಚಾವಸ್ತುಗಳು ಬಳಸಿಕೊಂಡು ನಿರ್ವಹಣೆ ಮಾಡಬಹುದಾದ ಯಾವ ಕೈಗಾರಿಕೆಗಳು ಈ ಪ್ರದೇಶದಲ್ಲಿ ನೆಲೆಸಿಲ್ಲ . ಇತ್ತಿಚಿಗಷ್ಟೆ 30 k m ಅಂತರದಲ್ಲಿ ಕಾಗಂಬಿ ಸಿದ್ದಪಡಿಸುವ ಶುಗರ್ ಪ್ಯಾಕ್ಟರಿ ಹುಟ್ಟಿಕೊಂಡಿದೆ . ಸ್ಥಳೀಯವಾಗಿ ಇದರಿಂದ ಪ್ರಯೋಜನ ಬಹಳ ಕಡಿಮೆ .
೪) ಸೇವಾವಲಯ
ಜನಾಕರ್ಷಣೆಯ ಗುರುತಿಸಬಹುದಾದ ಯಾವುದೆ ರೀತಿಯ ಸೇವೆ ಈ ಭಾಗದಲ್ಲಿ ಕಾಣ ಸಿಗಲಾರದು
೫) ಕೃಷಿ
ಈ ಪ್ರದೇಶದ ಜನರ ಜಿವಾಳ ಕೃಷಿಯಾಗಿದೆ . ಬಹಳಷ್ಟು ಜನರು ದೊಡ್ಡ ಪ್ರಮಾಣದ ಭೂಮಿ ಹಕ್ಕುದಾರರು. ವಂಶಪಾರಂಪರ್ಯವಾಗಿ ಈ ಸೌಲಭ್ಯ ಹೊಂದಿದ್ದಾರೆ . ಮಳೆ ಆಶ್ರೀತ ಬೇಸಾಯಮಾಡಲಾಗುವದು . ತೊಗರಿ ಪ್ರಮುಖ ವಾಣಿಜ್ಯ ಬೆಳೆ . ಕಡಲೆ ,ಸೂರ್ಯಕಾಂತಿ, ಹತ್ತಿ ಕೆಲವು ಕಡೆ ಕಬ್ಬು ಇತ್ತಿಚಗೆ ಬೆಳೆಯಲಾಗುತ್ತಿದೆ . 6 ತಿಂಗಳು ಮಾತ್ರ ವ್ಯವಸಾಯ ಚಟುವಟಿಕೆ ನಡೆಯುತ್ತವೆ .ಕೃಷಿಯಲ್ಲಿ ತೊಡಗಿಕೊಂಡ ಯುವಕರ ಸಂಖ್ಯೆ ಬಹಳ ಕಡಿಮೆ ಇದೆ. ಯಾಂತ್ರಿಕೃತ ವೈಜ್ಞಾನಿಕ ಬೇಸಾಯಕ್ಕಿಂತ ಸಂಪದಾಯಿಕ ಬೆಸಾಯ ಕ್ರಮ ಹೆಚ್ಚು ನೆಚ್ಚಿಕೊಂಡಿದ್ದಾರೆ . ಕೃಷಿಯೇ ಜನರ ಏಕಮೇವ ಆರ್ಥಿಕ ಆದಾಯದ ಮೂಲವಾಗಿದೆ. ಜೋಳ ಪ್ರಧಾನ ಆಹಾರ ಬೆಳೆಯಾಗಿದೆ. ಕೆಲವು ಸಿರಿದಾನ್ಯವೂಬಕೆಲವು ಕಡೆ ಬೆಳೆಯುತ್ತಾರೆ .
೬) ಸಂಸ್ಕೃತಿ
ಬಸವಣ್ಣನ ಪ್ರಭಾವ ಈ ಭಾಗದಲ್ಲಿ ಎದ್ದುಕಾಣುವದು . ಪ್ರಮುಖವಾಗಿ ಶೈವಾರಾಧನೆ ಹೆಚ್ಚಾಗಿದೆ.ವಿಶೇಷವಾದ ಪ್ರಬಾವಬಿರುವ ಜನಾಕರ್ಶಣೀಯವಾದ, ಆಚರಣೆಗಳು ಕಾಣಸಿಗಲಾರವು . ಪ್ರಮುಖವಾಗಿ ವ್ಯಾಪಾರಿಗಳು ದಿಪಾವಳಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಮಹಾನವಮಿ ಬನಿ ಮುಡಿಯುವದು ವಿಶೇಷ , ಕಾರುಣ್ಣಿವೆಗೆ ಎತ್ತು ಶೃಂಗಾರ ಮಾಡಲಾಗುವದು . ಎಳ್ಳಾಮವಾಸೆ ಚರಗ ಚಲ್ಲುವದು ರೈತಾಪಿ ಕುಟುಂಬದವರು ಮಾಡುತ್ತಾರೆ.ರೊಟ್ಟಿ ಪ್ರಧಾನ ಆಹಾರ . ಶ್ರಾಮಣ ಮಾಸದಲ್ಲಿ ಭಜನೆಗಳು ನಡೆಯುತ್ತವೆ. ಬಯಲಾಟ ಬೆಸಿಗೆಯಲ್ಲಿ ಅಪರೂಪಕ್ಕೆಮ್ಮೆ ಏರ್ಪಾಡು ಮಾಡಲಾಗುವದು . ಊರಿನ ಬಸವಣ್ಣ ದೇವರ ಜಾತ್ರೆಯಲ್ಲಿ ತೇರು ಎಳೆಯಲಾಗುವದು . ಎರಡು ವರ್ಷಕ್ಕೊಮ್ಮೆ ಜಾತಿ ಬೇದಬಾವ ಮರೆತು ಎಲ್ಲರೂ ಒಟ್ಟುಗೂಡಿ ಗ್ರಾಮ ದೇವಿ ದ್ಯಾಮವ್ವ ಜಾತ್ರೆ ಮಾಡುತ್ತಾರೆ . ಇದು ಸಂಬ್ರಮ ಸಡಗರದಿಂದ ನಡೆಯುವ ದೊಡ್ಡ ಆಚರಣೆ ಯಾಗಿದೆ. ಕನ್ನಡ ಬಹುಜನರಾಡುವ ಪ್ರಧಾನ ಬಾಷೆಯಾಗಿದೆ . ಸಾಹಿತ್ಯ ಕೃಷಿಮಾಡಿದವರು ವಿರಳ. ಕವಿ ವಿಮರ್ಷಕರು ಬರಹಗಾರ ಕನ್ನಡ ಸಾಹಿತ್ಯಕೆ ಕೊಡುಗೆಯಾಗಿ ನೀಡಿಲು ಈ ಭಾಗ ಸೋತಿದೆ. ಸಣ್ಣಪುಟ್ಟ ಗವಾಯಿಗಳು ಅಲ್ಲಲ್ಲಿ ಕಾಣಸಿಗುವರು. . ಪುರಾಣ ಪ್ರವಚನ ಕಿರ್ತನಕಾರರು ಸಂಗಿತಗಾರರು ಕಲಾಕಾರರು , ನಾಟಕಕಾರರು , .. ಹೀಗೆ ಯಾವುದೇ ಎಂಗಲ್ ನಲ್ಲಿ ನಾಡಿನಲ್ಲಿ ಖ್ಯಾತಿಪಡೆಯುವಷ್ಟು ಅನುಭವ, ಸಾಧನೆ ಮಾಡಿದ ಸಾದಕರು ಇಲ್ಲಿ ಕಾಣಸಿಗಲಾರರು . ದಾರ್ಮಿಕಪರಂಪರೆಯಲ್ಲಿ ವಿರಕ್ತಮಠ ಇದ್ದು ,ಸಮಾಜಕ್ಕೆ ಸಮುದಾಯಕ್ಕೆ ಇದರ ಕೊಡುಗೆ ಬಹಳ ಚಿಕ್ಕದು . 15 ನೇ ಶ. ಮಾನದ ತತ್ವ ಪದ ರಚನಾಕಾರ ಕಡಕೋಳ ಮಡಿವಾಳಪ್ಪ ಬಹುಖ್ಯಾತರು . ಊರಿನಲ್ಲಿ ರಾಮತೀರ್ಥ ಎಂಭ ಐತಿಹಾಸಿಕ ಕಟ್ಟಡ ವಿದ್ದು , ನಿರ್ವಹಣೆ ಇಲ್ಲದೆ ಸಿತಿಲಗೊಂಡಿದೆ.ಜಾನಪದ ಕಾಲಾಪ್ರಕಾರಗಳು ಇಲ್ಲಿ ಕಾಣಸಿಗಲಾರವು . ಬಿಳಿಬಟ್ಟೆ , ಧೋತಿ ,ಸೀರೆ ಜನರ ಸಾಂಪ್ರದಾಯಿಕ ಉಡುಗೆಯಾಗಿದೆ. ವಿವಾಹವು ಪ್ರದಾನವಾಗಿ ವಿರಶೈವ ವಿಧಿವಿಧಾನಗಳಂತೆ ನೆರವೆರುವವು. ಕಡಕೋಳ ಜಾತ್ರೆ ವಿಜೃಂಬಣೆ ಸಡಗರದಿಂದ ನಡೆಯುವದು ಸುತ್ತ ಹತ್ತಳ್ಳಿ ಜನರು ಈ ಜಾತೆಗೆ ಹೋಗುತ್ತಾರೆ .
೭) ಜಾತಿ ಧರ್ಮ
ವಿರಶೈವ ಲಿಂಗಾಯತರು ಪ್ರದಾನ ಜಾತಿ . ಮುಸ್ಲಿಂ ಧರ್ಮದವರು ಕೂಡ ಹೆಚ್ಚಾಗಿದ್ದಾರೆ .ಇನ್ನುಳಿದಂತೆ ಕುರುಬ , ಕಬ್ಬಲಿಗ, ಲಂಬಾಣಿ, ಮಾದಿಗ, ಹೊಲೆಯ , ಕುಂಬಾರ , ಗಾಣಿಗ,ಅಗಸ,ಈಡಿಗ, ಮೇದಾರ,ಸಮಗಾರ,ವಿಶ್ವಕರ್ಮ,ಜಾತಿಗಳು ಇವೆ. ಜೈನ ಕ್ರೈಸ್ತ, ಬೌದ್ದ, ಇತರೇ ಯಾವುದೇ ಧರ್ಮದ ಆರಾಧಕರು ಇಲ್ಲಿ ಕಾಣಸಿಗರು .
೮ ) ಸಾಮಾಜಿಕ ವ್ಯವಸ್ಥೆ
ಬಹಳ ಸಂಕೀರ್ಣ ಸಾಂಪದಾಯಿಕ ಸಾಮಾಜಿಕ ವ್ಯವಸ್ಥೆ ಈಗಲೂ ಇಲ್ಲಿ ಇದೆ . ಆಧುನಿಕ ಜಗತತ್ತಿನ ಬದಲಾವಣೆಗಳಿಗೆ ನಿದಾನವಾಗಿ ಈ ಊರು ತೆರೆದುಕೊಳ್ಳುತ್ತಿದೆ . ಹಾಗಂತ ಅತೀವೇಗದ ಬದಲಾವಣೆ ಕಾಣಲಾರದು ಇಲ್ಲಿ . ಇಲ್ಲಿ ಲಿಂಗಾಯತ ಬಣಜಿಗರು ಪ್ರಾಭಲ್ಯರು . ವಿವಿಧ ಜಾತಿಗಳು ಇದ್ದರು ಸಾಮರಸ್ಯದಿಂದ ಎಲ್ಲರೂ ಒಟ್ಟಾಗಿ ಬಾಳುತ್ತಾರೆ. ಆವುದೇ ಧಾರ್ಮಿಕ ಕಲಹಗಳು ಕಾಣಸಿಗಲಾರವು . ಬಹುಸಂಖ್ಯಾತರು ಮದ್ಯಮ ವರ್ಗದವರಾಗಿದ್ದಾರೆ , ಆಧುನಿಕ ಸೌಲಭ್ಯಗಳು ಇರುವ ಬೃಹತ್ ಮನೆಗಳು ಕಾಣಸಿಗಲಾರವು .
೯) ನೈಸರ್ಗಿಕ ಸಂಪತ್ತು
ಡೆಕನ್ ಟ್ರ್ಯಾಪ್ ನ ಕಪ್ಪು ವಜ್ರ ಎಂದರೆ ಕಪ್ಪು ಮಣ್ಣು ಮಾತ್ರ .ಇದೇ ಈ ಭಾಗದ ಅಪಾರ ಸಂಪತ್ತು .ಇದರ ಹೊರತಾದ ಕನಿಷ್ಟ ಮಟ್ಟದ ಮತ್ತಾವುದೇ ಖನಿಜ, ಕಾಡು , ಕಲ್ಲು , ಕಾಣಸಿಗಲಾರದು .ಇರಲಾರದು .
೧೦) ಅರ್ಥಿಕ ಸ್ಥಿತಿ
ಬಿಲೋ ಪಾವರ್ಟಿ ಲೈನ್( BPL ) ನಲ್ಲೇ ಹೆಚ್ಚು ಜನರಿದ್ದಾರೆ. ಕೃಷಿ ಚಟುವಟಿಕೆಗಳೇ ಜನರ ಆದಾಯದ ಮೂಲ. ಇದರ ಹೊರತಾಗಿ ಜನಸಾಮಾನ್ಯನಿಗೆ ಇತರೆ ಆದಾಯ ಲಭಿಸಲಾರದು. ಇತ್ತಿಚಗೆ ಉದ್ಯೋಗ ಅರಸಿಕೊಮಡು ಮುಂಬೈ ,ಬೆಂಗಳುರು ನಗರಗಳಿಗೆ ವಲಸೆ ಹೊಗಿ ದುಡಿದು ಸಾಕಷ್ಟು ಆರ್ಥಿಕ ಸ್ಥಿತಿವಂತಿಗೆ ಪಡೆದ ಕುಟುಂಬಗಳು ಕಾಣಬಹುದಾಗಿದೆ. ಕೆಲವರು ವ್ಯಾಪಾರ ವಾಣಿಜ್ಯ ಚಟುವಟಿಕೆ ಮಾಡುತ್ತ ತಕ್ಕಮಟ್ಟಿನ ಜೀವನ ನಿರ್ವಹಣೆ ಮಾಡುವದು ಕಾಣಬಹುದಾಗಿದೆ. ಹೇಳಿಕೊಳ್ಳುವಂತ ಆಗರ್ಭ ಶ್ರೀಮಂತರು ಈ ಊರಿನಲ್ಲಿ ಇಲ್ಲ.
೧೧)ಪ್ರವಾಸಿ ಸ್ಥಳ
ನೋಡಲೇ ಬೆಕು ಎನ್ನುವ ಉತ್ಸುಕವಾದ ಕಾತುರದ ಯಾವುದೇ ಪ್ರವಾಸಿ ಸ್ಥಳ ಯಡ್ರಾಮಿ ಸುತ್ತಮುತ್ತ ಎಲ್ಲಿಯೂ ಕಾಣ ಸಿಗದು . ಧಾರ್ಮಿಕ ಸಂಪ್ರದಾಯಸ್ಥರು ಕಡಕೋಳ ಮಠ ಕ್ಕೆ ಹೋಗುತ್ತಾರೆ ಇತಿಹಾಸ ಆಸಕ್ತರು ಯಡ್ರಾಮಿಯ ರಾಮ ತೀರ್ಥ ಮಿಕ್ಷಣೆ ಮಾಡಬಹುದು .
೧೨) ಸಾರಿಗೆ ಸಂಪರ್ಕ
ರಾಜ್ಯ ರಾಷ್ಟ್ರ ಹೆದ್ದಾರಿಗಳು ಈ ಊರಿನ ಆಸು ಪಾಸು ಇರಲಾರವು . ಜೇವರ್ಗಿ ಮತ್ತು ಸಿಂದಗಿ ಇಂದ ಪ್ರಧಾನ ರಸ್ತೆಗಳಿವ . ಸೂತ್ತಲ ಹತ್ತು ಹಳ್ಳಿಗಳಿಗೆ ಹೊಗಲು ಇನ್ನೂ ಕಾಲದಾರಿಯೆ ನೆಚ್ಚಿಕೊಳ್ಳಬೆಕಾಗಿದೆ. ಸಣ್ಣಪುಟ್ಟ ಹಳ್ಳಿಗಳ ರಸ್ತೆಗಳು ಇನ್ನೂ ಡಾಂಬರ್ ಕಂಡಿಲ್ಲ . ಯಡ್ರಾಮಿ ಪಟ್ಟಣಕ್ಕೆ ತಲುಪುವ ಪ್ರಧಾನವಾದ ಮೂರು ರಸ್ತೆಗಳು ಸಾದಾ ಹಾಳಾಗಿಯೇ ಇರುತ್ತವೆ. ಸೂತ್ತಲು ಜಾಲಿ ಮುಳ್ಳು ಗುಂಡಿಗಳು ದುರಸ್ಥಿ ಸದಾ ಕಾಣುವದು.ಸುವ್ಯವಸ್ಥಿತ ರಸ್ತೆಗಳು ಕಂಡಿರುವದೇ ಅಪರೂಪ .ಆಗ ಈಗ ಒಂದೆರಡು ಸರ್ಕಾರಿ ಬಸ್ ಈ ಪಟ್ಟಣಕ್ಕೆ ಬರುತ್ತವೆ . ಅದೆಷ್ಟೋ ಹಳ್ಳಿಗರು ತಮ್ಮಊರಿನ ಕ್ರಾಸ್ ಗೆ ಬಂದೇ ಬಸ್ ಹತ್ತಬೇಕು . ಪಟ್ಟಣದಲ್ಲಿ ಈ ವರೆಗೂ ಆಟೋಗಳು ಇಲ್ಲ . 40 k m ಬಸ್ಸಿನಲ್ಲಿ ಹೋಗಿಬರಲು ಬರೊಬ್ಬರಿ 6 ಗಂಟೆಗಿಂತ ಹೆಚ್ಚಿನ ಸಮಯ ಬೇಕು. ಒಟ್ಟಾರೆ ರಸ್ತೆಗಳು ಆ ದೇವರಿಗೆ ಪ್ರೀಯವಾದಂತವು. ರೈಲು ಸಾರಿಗೆ ಹತ್ತಬೇಕೆಂದರೆ ಜಿಲ್ಲಾ ಕೇಂದ್ರಕ್ಕೆ ಹೋಗುವದು ಅನಿವಾರ್ಯ .
೧೩) ಜಲಸಂಪತ್ತು
ಅಂತರ್ಜಲವೇ ಕುಡಿಯುವ ನೀರಿನ ಪ್ರಧಾನ ಮೂಲ . ಯಾವುದೇ ಕೆರೆ ಇರಲಾರದು . ಊರಿನ ಬಹುದೊಡ್ಡ ನೀರು ಈ ಊರಿನ ಮೂಲಬೂತ ಬಹು ದೊಡ್ಡ ಸಮಸ್ಯೆಯಾಗಿದೆ. ಜನರು ಬೆಸಿಗೆಕಾಲದಲ್ಲಿ ಹನಿನಿರಿಗೂ ಪರದಾಡಬೇಕು . ಊರಿನಲ್ಲಿರುವ ಹೆಣ್ಣುಮಕ್ಕಳಿಗೆ ಯಾವಾಗಲೋ ಒಮ್ಮೆ ನಲ್ಲಿಯಲ್ಲಿ ಬರುವ ನೀರು ಹಿಡಿಯುವದೇ ಒಂದು ಸಂಬ್ರಮ ಮತ್ತು ಬಹುದೊಡ್ಡ ಕೆಲಸವಾಗಿದೆ . ಅಪಾರ ಅಂತರ್ ಜಲಸಂಪನ್ಮೂಲ ಇಲ್ಲಿ ಇದ್ದರೂ, ಅದರ ಸಮರ್ಪಕ ಬಳಗೆ ಸೂಕ್ತ ನಿರ್ವಹಣೆ ಇಲ್ಲದೇ ಊರಿಗೆ ಊರೇ ಸದಾ ನೀರಿಗಾಗಿ ಬಾಯ್ದೆರೆದು ಕೂತಿರುತ್ತದೆ.
೧೪) ವಾಣಿಜ್ಯ ವ್ಯವಹಾರ
ಸೂತ್ತ ಮುತ್ತಲಿನ 30 k m ವ್ಯಾಪ್ತಿ ಯ ಚಿಕ್ಕ ಚಿಕ್ಕಹಳ್ಳಿಗಳಿಗೆ ಯಡ್ರಾಮಿಯೇ ಒಂದು ವಾಣಿಜ್ಯ ವ್ಯವಹಾರದ ಕೇಂದ್ರವಾಗಿದೆ.. ಜನರಿಗೆ ಅಗತ್ಯವಾದ ಮೂಲಭೂತ ಸೌಲಬ್ಯಗಳನ್ನು ವದಗಿಸುವಷ್ಟು ಶಕ್ತತೆ ಪಡೆದಿದೆ ಈ ನಗರ . ಎಲ್ಲಾ ವಿಧವಾದ ಅಂಗಡಿ ಮುಗ್ಗಟ್ಟುಗಳು ವ್ಯಾಪಾರ ವೈವಾಟು ಕಾಣಬಹುದು.ಹೊಲ್ ಸೆಲ್ ದರದ ವ್ಯಾಪಾರಕ್ಕಿಂತ ರಿಟೆಲ್ ಧರದ ವ್ಯಾಪಾರವೇ ಹೆಚ್ಚಾಗಿ ಇಲ್ಲಿ ನಡೆಯುವದು. ಸೋಮುವಾರ ಸಂತೆ ನಡೆದು ವಾರದವರೆಗೆ ಬೇಕಾದ ತರಕಾರಿ ಜನರಿಗೆ ಸಿಗುವದು . ಬಟ್ಟೆ, ಟೆಷನರಿ, ಪಾತ್ರೆ , ಜ್ಯೂಲರಿ, ಕಿರಾಣಿ, ಮೆಡಿಲ್ ಶಾಪ್ ಹೀಗೆ ..ನಾನಾ ವಿಧದ ಅಂಗಡಿಗಳು ಕಾಣಬಹುದು .
ಬಹಳ ವರ್ಷಗಳಿಂದಲೂ ಸಿಂಡಿಕೇಟ್ ಬ್ಯಾಂಕ್ ಒಂದೇ ಹಣಕಾಸು ಚಟುವಟಿಕೆ ನಡೆಸುತ್ತಿತ್ತು . ಇತ್ತಿಚಗಷ್ಟೆ ಕೃಷ್ಣಾ ಗ್ರಾಮೀಣ ಬ್ಯಾಂಕ್ ರಚನೆಯಾಗಿದೆ. ಇಷ್ಟು ದೊಡ್ಡ ಊರಿಗೆ ಕೇವಲ ಎರಡು ಸರ್ಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸುವದು ಸೊಜಿಗ . ಒಟ್ಟಾರೆ ಊರಿನಲ್ಲಿ ಎಷ್ಟು ಹಣಕಾಸು ವೈವಾಟು ನಡೆಯುತ್ತದೆ ಎನ್ನುವದು ಮೆಲ್ನೊದಿಂದಲೇ ಅರಿಯಬಹುದು. ಖಾಸಗಿ ಲೇವಾದೇವಿ ಸಂಸ್ತೆಗಳು ಪೈನಾನ್ಸ್ ಗಳು ಇದ್ದು , ಜನರನ್ನು ಉದ್ದಾರ ಮಾಡುವದಕ್ಕಿಂತ ಶೋಷಣೆ ಮಾಡಿದ್ದೆ ಹೆಚ್ಚು . ಯಾವುದೇ ಸಹಕಾರಿ ಸಂಘ ಸಂಸ್ಥೆಗಳೂ ಇಲ್ಲಿ ಕಾಣಲಾರವು .
೧೫) ಸ್ಥಳಿಯ ಆಡಳಿತ
ಊರು ಗಾತ್ರದಲ್ಲಿ ದೊಡ್ಡದೆನೋ ಸರಿ .ಆದರೆ, ಆಡಳಿತ ಮಾತ್ರ ಗ್ರಾಮ ಪಂಚಾಯತಿಯದ್ದು. ಆಶ್ಚರ್ಯ ಎನಿಸಿದರೂ ಇದುವೆ ಸತ್ಯ.ಬಹುಷ್ಯ ಹೊಸದಾಗಿ ರಚಿಸುತ್ತಿರುವ ಎಲ್ಲಾ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿ ಇರುವ ಏಕೈಕ ಊರು ಇದೊಂದೇ ಇರಬೇಕು . ಉಳಿದಂತೆ , ಕಂದಾಯ ವ್ಯವಹಾರ ನಿರ್ವಹಣೆಗಾಗಿ ಉಪತಶಿಲ್ದಾರ ಕಛೇರಿ ಇದೆ . ಈ ಗ್ರಾಮ ಪಂಚಾಯತಿಗೆ ಸರ್ಕಾರ ನೀಡುವ ಅನುದಾನ ಹೊರತಾಗಿ ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲ. ಅದಾವಾಗಲೋ ಬರುವ ಸರ್ಕಾರ ಅನುಧಾನವು ಕೂಡ, ಪುಡಿ, ಮರಿ ರಾಜಕಾರಣಿಗಲಿಂದ ಹಿಡಿದು ಎಲ್ಲರಿಗೂ ಹರಿದು ಹಂಚಿ ಹೊಟ್ಟೆ ತುಬ್ಬಿಸಿಕೊಂಡು , ಅಳಿದುಳಿದದ್ದು ಫಲಾನು ಭವಿಗಳಿಗೆ ಫಲ ಪ್ರದವಾಗೂವ ವೇಳೆಗೆ ಬತ್ತಿಬರಿದಾಗಿಹೋಗಿರುತ್ತದೆ . ಇನ್ನೂ ಅಗತ್ಯ ಮೂಲಭೂತ ಸೌಲಬ್ಯ ಎನ್ನುವದು ಇಲ್ಲಿ ವಿಕಟ ಹಾಸ್ಯವೇ ಸರಿ.
16)ಆರೋಗ್ಯ ವೈದ್ಯಕೀಯ
ಸರ್ಕಾರಿ ಉನ್ನತಿಕರಿಸಿದ ಸಮುದಾಯ ಆರೋಗ್ಯ ಕೇಂದ್ರ ಇದೆ. ಇಲ್ಲಿಯ ಸೌಲಭ್ಯಗಳು ದೇವರಿಗೆ ಪ್ರೀಯ. ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳು ಕೊರತೆ ಎದ್ದು ಕಾಣುವವು . ಸುಸಜ್ಜಿತವಾದ ಉತ್ತಮ ಖಾಸಗಿ ಆಸ್ಪತ್ರೆ ಇಲ್ಲಿ ಕಾಣಲಾರವು. ಆಶ್ಚರ್ಯ ಎಂದರೆ mbbs ಪದವಿ ಹೊಂದಿದ ಖಾಸಗಿ ವೈದ್ಯರೂ ಈ ಊರಿನಲ್ಲಿ ಇಲ್ಲವೇ ಇಲ್ಲ . ಯಾವುದಾದರೂ ಆಕಸ್ಮಿಕ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ದೂರದ ಊರಿಗೆ ಹೊಗಬೇಕು .ತಾಲ್ಲೂಕು ಕೇಂದ್ರ ಎಂದು ಗುರುತಿಸಲಾದ ಈ ಪಟ್ಟಣದ ಪರಸ್ಥಿತಿಯೇ ಹೀಗಿರುವಾಗ ಇನ್ನೂ ಸುತ್ತಲ ಹಳ್ಳಿಗಳ ಕಥೆ ಬಿಡಿಸಿ ಹೇಳಬೇಕಿಲ್ಲ.
೧೭) ನಾಗರಿಕ ಸೌಲಭ್ಯಗಳು
ಜಿಲ್ಲಾ ಕೇಂದ್ರದಿಂದ ಬಹುದೂರದಲ್ಲಿ ಇರುವ ಈ ಊರು ಸ್ವಯಂ ಆಗಿ ತಾಲ್ಲೂಕಿನ ಯಾವ ಲಕ್ಷಣಗಳೂ ಮೈಗೂಡಿಸಿಕೊಂಡು ಬೆಳೆದಿಲ್ಲ .ಸರ್ಕಾರ ಹಾಕುವ ಸೌಲಬ್ಯ ಎನ್ನುವ ಬಿಕ್ಷೆಯನ್ನೆ ನೆಚ್ಚಿಕೊಂಡು ಉಸಿರಾಡುತ್ತಿದೆ.. ಹೀಗಾಗಿ ಸರ್ಕಾರವೇ ಅಭಿವೃದ್ದಿ ಕುರಿತು ಕಣ್ಣುತೆರೆಯ ಬೇಕು ನಂಬಿದರೆ ಖಚಿತವಾಗಿ ಸಮರ್ಥಿಸಿ ಹೇಗೆ ಹೇಳುವದು ?
ಅಷ್ಟಕ್ಕೂ ಪ್ರಮುಖವಾಗಿ ಸರ್ಕಾರವೇ ಇಗಾಗಲೇ ಕೆಲವು ಸೌಲಬ್ಯ ಗಳನ್ನು ಈ ಊರಿನ ಅಭಿವೃದ್ದಿಗೆ ನೀಡಿದೆ. ಆದರೆ , ಅವು ಗುಣಮಟ್ಟದಿಂದ ಕುಡಿದ್ದು ಫಲಾನುಭವಿಗಳಿಗೆ ದಕ್ಕುವಲ್ಲಿ ವಿಫಲವಾಗಿವೆ. ಪ್ರಮುಖವಾಗಿ , ಪ್ರಾಥಮಿಕ ಶಾಲೆ , ಪ್ರೌಢಶಾಲೆ, ಕಲಾ ವಾಣಿಜ್ಯ ಕಾಲೇಜು, ಪಶು ಆಸ್ಪತ್ರೆ, ಪೋಲಿಸ್ ಸ್ಟೆಷನ್, ಉಪತಶೀಲ್ದಾರ್ ಕಚೇರಿ, ನಾಡಕಛೆರಿ , ರೈತಸಂಪರ್ಕ ಕೇಂದ್ರ, ಅಂಚೆಕಚೇರಿ ,ಬ್ಯಾಂಕ್, ಮುಚಿಹೋದ ರೆಶ್ಮೆ ಕಛೆರಿ, ಹಾಳಾದ ಉಗ್ರಾಣ , ಮಕ್ಕಳಿಗೆ ಹಾಸ್ಟೆಲ್ , ಚಿಕ್ಕ ಬಸ್ಟ್ಯಾಂಡ್ , ಗ್ರಾಮ ಪಂಚಾಯತಿ , ಇತ್ಯಾದಿ ... ಇವು ಪ್ರಸ್ತುತವಾಗಿ ಇರುವ ನಾಗರಿಕ ಸೌಲಬ್ಯಗಳಾಗಿವೆ . ಇವುಗಳ ಹೊರತಾದ ಮತ್ತಾವ ಸರ್ಕಾರಿ ಕಛೇರಿಗಳು ಇಲ್ಲಿ ಇರಲಾರವು. ಪ್ರಸ್ತುತ ಈ ಕಛೇರಿಗಳ ಸೇವೆ ಗುಣಮಟ್ಟದಿಂದ ಕೂಡಿಲ್ಲ. ನಾಗರಿಕರು ಸೌಲಭ್ಯ ಅರಸಿ ಹಪಹಪಿದುತ್ತಾ ಬಹಳಷ್ಟು ಸಂಕಟಪಡುವದನ್ನು ಕಾಣಬಹುದು ..
***ನಾಗರಿಕ ಸೌಲಬ್ಯಗಳ ಕೊರತೆಗಳು
ತಾಲ್ಲೂಕು ಕೇಂದ್ರವಾಗುವ ಯಡ್ರಾಮಿ ಪಟ್ಟಣದಲ್ಲೇ ಹತ್ತಾರು ನಾಗರಿಕ ಸೇವಾ ಸೌಲಭ್ಯಗಳ ಕೊರತೆ ಎದ್ದು ಕಾಣುವವು .ಹೀಗಿರುವಾಗ ಸೂತ್ತಲಿನ ಹತ್ತುರುಗಳ ಕತೆ ವಿಸ್ತರಿಸಿ ಹೇಳಬೇಕಿಲ್ಲ .
ಪ್ರಮುಖವಾಗಿ ಕಂಡುಬರುವ ಸಮಸ್ಯೆಗಳು ಈ ರೀತಿ ಪಟ್ಟಿಮಾಡಬಹುದು .
1)ಸಾಂಪ್ರದಾಯಿಕ ಸನಾತನ ಕೃಷಿಪದ್ದತಿ ಇದೆ.
2) ಜಿಲ್ಲೆಯಿಂದ ಬಹುದೂರವಿದ್ದು ಸದಾ ನಿರ್ಲಕ್ಷಕ್ಕೆ ಒಳಗಾಗಿರುವದು
3) ಸುಶಿಕ್ಷಿತರು ಉದ್ಯೋಗ ಅರಸಿ ವಲಸೆಹೊಗುವದು
4) ಆರ್ಥಿಕ ಬಲಹೀನತೆ ಸದಾ ಕಾಡುವದು
5) ಕೃಷಿಗೆ ಪರ್ಯಾಯವಾಗಿ ಯಾವುದೇ ಉದ್ಯೋಗ ಅವಕಾಶಗಳು ಇಲ್ಲದಿರುವದು .
6)ಸಮರ್ಪಕ ಗುಣಮಟ್ಟದ ರಸ್ತೆ ಸಮಸ್ಯೆ ಸದಾ ಇರುವದು
7) ಸಾಕಷ್ಟು ಅಗತ್ಯ ನೀರಿನ ಪುರೈಕೆ ಕೊರತೆ ಇದೆ
8) ಶೌಚಾಲಯಗಳ ಕೊರೆ ಇದ್ದು ಶೆ 90% ಜನ ಬಯಲು ಶೌಚಕ್ಕೆ ಹೋಗುವದು
9) ಒಳಚರಂಡಿ ಇಲ್ಲದೇ ಮೊರಿ ನೀರು ಓಣಿ ರಸ್ತೆಯಲ್ಲಿ ಹರಿಯುವದು
10) ಊರ ಸುತ್ತಲು ಗಬ್ಬು ನಾರುವ ಕಸ ಮಲ ಸದಾ ಇರುವದು
11)ಸಮರ್ಪಕ ವಿದ್ಯೂತ್ ಪುರೈಕೆ ಇಲ್ಲದಿರುವದು
12)ಬದಲಾವಣೆ ಬಯಸದ ಜಡತ್ವದ ಪ್ರಜ್ಞಾವಂತ ಯುವಜನಾಂಗ ಇಲ್ಲದಿರುವದು
13) ಸೌಲಬ್ಯ ಕ್ಕಾಗಿ ಹಾತೊರೆದು ಹೋರಾಡುವ ಸಂಘ ಸಂಸ್ಥೆಗಳ ಕೊರತೆ ಇದೆ
14) ಮಹಿಳಾ ಸಬಲಿಕರಣದ ದೌರ್ಬಲ್ಯ ಎದ್ದುಕಾಣುವದು
15) ಸೇವಾಭಾವದ ಸ್ಥಳೀಯ ರಾಜಕೀಯ ಮುಖಂಡರ ಕೊರತೆ ಹೆಚ್ಚಿದೆ.
16) ಜನ ಪ್ರತಿನಿಧಿಗಳ ಇಚ್ಚಾಶಕ್ತಿಕೊರತೆ
17) ಎಲ್ಲವನ್ನೂ ಸರ್ಕಾರವೇ ಮಾಡಲಿಎನ್ನುವ ಮನಸ್ಥಿತಿ ಹೆಚ್ಚಾಗಿದೆ.
18) ಸಮುದಾಯದ ಬೆಳವಣಿಗೆಗಿಂತ ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಪ್ರಾಸತ್ಯ ವಿದೆ
19) ಗರಿಷ್ಟ ಮಟ್ಟದ ಭ್ರಸ್ಟಾಚಾರ ತಾಂಡವಾಡುವದು
20) ಸೌಲಭ್ಯ ಪಡೆಯಲು ಹೊರಾಟ ಹರತಾಳ ಮಾಡಲು ಉತ್ಸುಕವಿಲ್ಲದ ಯೋವೃದ್ದ ಮನಸ್ತಿತಿ
21) ಪ್ರಭಲ ವಿರೋದ ಪಕ್ಷ, ಇಲ್ಲದೇ ಹೊರಾಟ ಮಾಡದಿರುವದು
22) ಜಿಲ್ಲಾಕೇಂದ್ರದಿಂದ ಬಹು ದೂರವಿರುವದು & ತಾಲ್ಲೂಕು ಕೇಂದ್ರ ವಿಸ್ತಾರ ದೊಡ್ಡದಾಗಿರುವದು
23) ವೈವಿದ್ಯಮಯ ಜಾತಿ ಜನರು ಇವರಲ್ಲಿ ಹೊಸ ಬದಲಾವಣೆ ಬಗ್ಗೆ ನಿರಾಸಕ್ತಿ ಇರುವದು
24) ಅಧಿಕ ಅನಕ್ಷರಸ್ಥ ಸಮುದಾಯ ಇರುವದು
25) ದಿರ್ಘಕಾಲದ ಯೋಜನೆ ಅಬಿವೃದ್ದಿಗೆ ಇಚ್ಛಾ ಶಕ್ತಿ ಕೊರತೆ ಇರುವದುಬ
26) ಎಲ್ಲ ಸಮುದಾಯಗಳು ಒಗ್ಗೂಡಿಸಿ ಮುನ್ನಡೆಸುವ ಒಂದು ಸಂಘ ಸಂಸ್ಥೆ ಸಮರ್ಥ ಮುಖಂಡ ವ್ಯಕ್ತಿ ಇಲ್ಲದಿರುವದು
27) ಜಾಗತಿಕ ಬದಲಾವಣೆಗಳತ್ತ ವಾಲದೇ ತಟಸ್ಥ ಜಡತ್ವದ ಭಾವನೆ
28) ಆರ್ಥಿಕ ಅಭಿವೃದ್ದಿಗೆ ಬೇರೆ ಆದಾಯ ಮೂಲಗಳು ಇಲ್ಲದಿರುವದು
29) ಸರ್ಕಾರಿ ಆಡಳಿತ ವ್ಯವಸ್ಥೆಯ ಜಡತ್ವ
* ಜರುರಾಗಿ ಬೇಕಾದ ಸೌಲಬ್ಯಗಳ ಬಗ್ಗೆ ಕಾಳಜಿಇಲ್ಲದಿರುವದು
ಕನಿಷ್ಟವಾದ ಅಭಿವೃದ್ಧಿ ಜೊತೆಗೆ ನಾಗರಿಕ ಸೌಲಬ್ಯಗಳು ಒಂದು ತಾಲ್ಲೂಕು ಅಪೇಕ್ಷಿಸುತ್ತದೆ .ಇದರಂತೆ ಯಡ್ರಾಮಿ ತಾಲ್ಲೂಕು ಎಮದು ಕೇವಲ ಘೋಣೆ ಮಾಡಿದರೆ ಸಾಲದು ಬದಲಾವಣೆಗಾಗಿ ಪ್ರಗತಿ,ಅಬಿವೃದ್ದಿಗಾಗಿ ಕೆಲವು ಅತ್ಯಗತ್ಯ ಸೌಲಬ್ಯಗಳು ಈ ಊರು ಅಪೇಕ್ಷಿಸುತ್ತದೆ . ಈ ಮೂಲಕ ಕನಿಷ್ಟ ಅಭಿವೃದ್ಧಿ ಫಥ ಹಿಡಿಯಬಹುದು .. ಅವುಗಳೆಂದರೆ..
1) ಸುಸಜ್ಜಿತವಾದ ಹೈಟೆಕ್ ಆಸ್ಪತ್ರೆ
2) ಸರ್ಕಾರಿ / ಖಾಸಗಿ ಡಿಪ್ಲೊಮಾ, ಪ್ಯಾರಾಮೆಡಿಕಲ್, ಐ ಟಿ ಐ ಕಾಲೇಜುಗಳು
3) ಪಿ ಯು ವಿಜ್ಞಾನ ಕಾಲೇಜು & ಡಿಗ್ರಿ ಕಾಲೇಜು
4) ತಸೀಲ್ದಾರ ಕಚೇರಿ
5) ಬಸ್ ಡಿಪೋ
6) ಕೃಷಿ ಮಾರುಕಟ್ಟೆ
7) ಉತ್ತಮ ಗುಣಮಟ್ಟದ ರಸ್ತೆ ಗಳು
8) ಪಟ್ಟಣ ಪಂಚಾಯತಿ
9) ನೀರು ಸಂಸ್ಕರಣ ಘಟಕ
10) ಕೈಗಾರಿಕ ವಲಯ ಸ್ಥಾಪನೆ
11) ಯಾವುದಾದರೂ ಸಂಶೋಧನಾ ಕೇಂದ್ರ ಸ್ಥಾಪನೆ
12) ಉತ್ತಮ ಸಾರಿಗೆ ಸೌಲಭ್ಯ
13)ಮಂಡಳಿ ನಿಗಮಗಳ ಶಾಖಾ ಕಚೆರಿ ಸ್ಥಾಪನೆ
14) ಗೃಹಮಂಡಳಿ ಸ್ಥಾಪನೆ
15)ವಿಶೇಷ ಅಭಿವೃದ್ಧಿ ಪ್ರಾಧಿಕಾರದ ರಚನೆ
16)ವಿಶ್ವ ವಿದ್ಯಾನಿಲಯದ ಅದ್ಯಯನ ವಿಭಾಗ ಸ್ಥಾಪನೆ
17)ಬಡಾವಣೆಗಳ ರಚನೆ ಮತ್ತು ಮೂಲಭೂತ ಅಭಿವೃದ್ಧಿ
18)ಉತ್ತಮ ಬೀದಿದೀಪ ಅಳವಡಿಕೆ
19) ಸರ್ಕಾರಿ ಕಛೇರಿಗಳಿಗೆ ಹೊಸ ಕಟ್ಟಡಗಳ ರಚನೆ
20)ಉತ್ತಮ ವ್ಯವಸ್ಥಿತ ಯೋಜನಾಬದ್ದ ಮಾರುಕಟ್ಟೆ ಸೌಲಭ್ಯ
21) ಉತ್ತಮ ಉದ್ಯಾನವನಗಳ ರಚನೆ
22) ಹೆಣ್ಣುಮಕ್ಕಳಿಗೆ ವಿಶೇಷ ವೃತ್ತಿ ತರಬೇತಿ ಕೌಶಲ್ಯ ಕೇಂದ್ರ ಸ್ಥಾಪನೆ
23)ಲಲಿತಕಲೆ ಅಭಿವೃದ್ಧಿ ಗೆ ಒತ್ತು ನೀಡಬೇಕು
24)ಯಡ್ರಾಮಿ ನಗರ ಅಭಿವೃದ್ಧಿ ಗಾಗಿ ವಿಶೇಷ ಪ್ಯಾಕೇಜ್ ಅನುದಾನ ಕ್ಕೆ ಹಕ್ಕೊತ್ತಾಯ
25) ವಿವಿದೊದ್ದೇಶದ ಸಂಘ ಸಂಸ್ಥೆ ರಚನೆ ಗೆ ಪ್ರೇರಣೆ ಮತ್ತು ಅನುದಾನ ಬಿಡುಗಡೆ
ನನ್ನ ಕಲ್ಪನೆ ಮತ್ತು ವಿವೇಚನೆಯಲ್ಲಿ ಯಡ್ರಾಮಿ ನಗರ ಮತ್ತು ತಾಲ್ಲೂಕು ಸಮಗ್ರ ಚಿತ್ರಣ , ಹಿಂದುಳಿಯುವಿಕೆ ಮತ್ತು ಭವಿಷ್ಯದ ಬದಲಾವಣೆ ಮಾರ್ಗಸೂಚಕಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿರುವೆ .ಊರಿನಲ್ಲಿ ವಾಸವಾಗಿರುವ ಜನಸಮುದಾಯದಲ್ಲಿ ತಮ್ಮ ತಾಲ್ಲೂಕಿನ ಸಮಗ್ರ ಅಭಿವೃದ್ಧಿ,ಗಾಗಿ ಉತ್ಸುಕತೆ ಬೇಕಿದೆ,ಒಂದಿಷ್ಟು ಹೋರಾಟ ,ಚಿಕ್ಕ ತ್ಯಾಗ , ದೂರದೃಷ್ಟಿ ಕಲ್ಪನೆ ರಾಜಕೀಯ ದ್ವೇಷ ಅಸುಹೆ ಜಾತಿ ಭೇಧಭಾವ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಬ್ರಸ್ಟಾಚಾರ ರಹಿತ ಪಾರದರ್ಶಕ ಆಡಳಿತ ವ್ಯವಸ್ಥೆ ರಚನೆಗೆ ಎಲ್ಲರೂ ಮುಂದಾಗಬೇಕು . ಈ ಮುಲಕ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬದಲಾವಣೆಯಾದ ತಾಲ್ಲುಕು ಎಂದು ಹೆಸರು ಮಾಡಬೇಕು. ಒಂದು ವೇಳೆ ಬರಿ ತಾಲ್ಲೂ ರಚನೆ ಅಥವಾ ಘೊಷಣೆ ನೆಚ್ಚಿಕೊಂಡು ಮುಗಿಗೆ ತುಪ್ಪ ಸವರಿರುವದನ್ನೇ ಹೆಮ್ಮೆ ,ತೃಪ್ತಿ ಪಡತಾ ,ಉದಾಸಿನ ಭಾವದಿಮದ ಯತಾ ಸ್ಥಿತಿಯಲ್ಲಿ ಮುಂದುವರೆದರೆ .. .ಖಂಡಿತಾ ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು ಯಡ್ರಾಮಿ ಎಂದು ಕುಖ್ಯಾತಿ ಯ ಹಣೆ ಪಟ್ಟಿ ಪಡೆಯುವದರಲ್ಲಿ ಎರಡು ಮಾತಿಲ್ಲ.
****†*****†*****"
ರಚನೆ
ಪ್ರಹ್ಲಾದ್ .ವಾ. ಪತ್ತಾರ
ಕಾಮೆಂಟ್‌ಗಳು